Coma latest updates

Monday

‘ಕೋಮಾ’ ತಂದುಕೊಟ್ಟ ಪುಲಕ!

‘ಕೋಮಾ’ ವೈದ್ಯಕೀಯ ವಿಜ್ಞಾನದ ಪದ. ಈ ಪದಕ್ಕೂ ನಿಮ್ಮ ಸಿನಿಮಾಕ್ಕೂ ಸಂಬಂಧ ಇದೆಯೇ? ಎನ್ನುವ ಪ್ರಶ್ನೆ ಕೇಳಿದರೆ ನಾಯಕ ಕಾರ್ತಿಕ್ ಮುಗುಳ್ನಗುತ್ತಾರೆ.ನಗುತ್ತಲೇ– ‘ಕೋಮಾ, ಪ್ರೀತಿ–ಪ್ರೇಮ,  ಥ್ರಿಲ್ಲರ್.. ಹೀಗೆ ಒಂದು ವಿಶೇಷ ವರ್ಗದ ಚಿತ್ರ ಎಂದು ಗೆರೆ ಎಳೆದು ಹೇಳಲು ಸಾಧ್ಯವಿಲ್ಲ’ ಎನ್ನುತ್ತಾರೆ.
ಇಂದು (ಮೇ 27) ತೆರೆ ಕಾಣುತ್ತಿರುವ ‘ಕೋಮಾ’ ಚಿತ್ರದ ಮೂಲಕ ನಾಯಕನಾಗಿ ಬಡ್ತಿ ಪಡೆದಿರುವ ಕಾರ್ತಿಕ್‌ಗೆ ಈ ಚಿತ್ರ ನಿರೀಕ್ಷೆಗಳ ಆಗರ. ಕೋಲಾರ ಜಿಲ್ಲೆಯ ಮಾಲೂರಿನ ಕಾರ್ತಿಕ್, ಬಾಲ್ಯದಲ್ಲಿ ಶಾಲೆಯ ವೇದಿಕೆಗಳಲ್ಲಿ ಶಿಕ್ಷಕರ ಒತ್ತಾಯಕ್ಕೆ ನೃತ್ಯ ಮಾಡಿದವರು.
ನಂತರದ ದಿನಗಳಲ್ಲಿ ನೃತ್ಯವೇ ಅವರ ಟ್ರೇಡ್‌ಮಾರ್ಕ್‌ ಆಗಿ ಪರಿಣಮಿಸಿತು. ಎಂಜಿನಿಯರಿಂಗ್ ವ್ಯಾಸಂಗ ಮಾಡುವಾಗ ತಮ್ಮದೇ ಆದ ನೃತ್ಯತಂಡ ಕಟ್ಟಿ ಊರೂರು ಸುತ್ತಿ ಕಾರ್ಯಕ್ರಮ ನೀಡಿದರು. ಖಾಸಗಿ ವಾಹಿನಿಗಳ ನೃತ್ಯ ಸ್ಪರ್ಧೆಗಳಲ್ಲಿ ಮೈ ಬಳುಕಿಸಿದರು. ಹೀಗೆ ನೃತ್ಯಕ್ಕೆ ಸೀಮಿತವಾಗಿದ್ದವರಿಗೆ ನಟನೆಯ ಆಸೆ ಹಚ್ಚಿದ್ದು ಕಿರುಚಿತ್ರಗಳು.
ಎಂಎನ್‌ಸಿ ಕಂಪೆನಿಯಲ್ಲಿ ಕೆಲಸ ಮಾಡುವಾಗ ಬಿಡುವಿನ ಅವಧಿಯಲ್ಲಿ ಕಿರುಚಿತ್ರ ರೂಪಿಸಿದ ಕಾರ್ತಿಕ್ ‘ನಾನೇಕೆ ಬೆಳ್ಳಿ ತೆರೆಯ ನಟನಾಗಬಾರದು’ ಎನಿಸಿದ್ದೇ ತಡ, ಸಾಗಿದ್ದು ಮುಂಬೈನ ಅನುಪಮ್ ಖೇರ್ ನಟನೆಯ ತರಬೇತಿ ಶಾಲೆಗೆ.
ಬೆಂಗಳೂರಿನ ಗಾಂಧಿನಗರ ಪ್ರವೇಶಿಸಿದ ಕಾರ್ತಿಕ್ ‘ಚಿರವಾದ ನೆನಪು’ ಚಿತ್ರದಲ್ಲಿ ಸಣ್ಣ ಪಾತ್ರ ದಕ್ಕಿಸಿಕೊಳ್ಳುವ ಮೂಲಕ ತೆರೆಯಲ್ಲಿ ಚಿಗುರುವ ವಿಶ್ವಾಸ ಗಳಿಸಿಕೊಂಡರು. ಆ ಸಣ್ಣ ಪಾತ್ರದಲ್ಲಿನ ಉತ್ತಮ ನಟನೆ ಚಿತ್ರದ ಸಹಾಯಕ ನಿರ್ದೇಶಕರಾಗಿದ್ದ ರವಿ ಮತ್ತು ಚೇತನ್‌ರ ಗಮನ ಸೆಳೆಯಿತು. ಕೆಲ ದಿನಗಳಲ್ಲಿಯೇ ರವಿ ಮತ್ತು ಚೇತನ್‌ ಕೂಡಿ ನಿರ್ದೇಶಿಸಿದ ‘ಕೋಮಾ’ ಚಿತ್ರಕ್ಕೆ ನಾಯಕನಾಗಿ ಆಯ್ಕೆಯಾದರು. ಈಗ ಆ ಚಿತ್ರ ತೆರೆಕಾಣುತ್ತಿರುವ ಸಂಭ್ರಮ ಅವರದು.
‘ನಾನು ಈ ಸಿನಿಮಾದಲ್ಲಿ ಚಿತ್ರಕಥೆಯಿಂದಲೇ ಭಾಗಿಯಾಗಿದ್ದೇನೆ. ನಾವು ಇಲ್ಲಿಯವರೆಗೂ ಚಿತ್ರೀಕರಣ ಮಾಡದ ಅಜ್ಞಾತ ಸ್ಥಳಗಳಲ್ಲಿ ಕ್ಯಾಮೆರಾ ಇಟ್ಟಿದ್ದೇವೆ. ಚಿತ್ರೀಕರಣಕ್ಕೂ ಪೂರ್ವದಲ್ಲಿ ನಾವು ಏನನ್ನು ಹೇಳಬೇಕು ಮತ್ತು ಕಥೆಯನ್ನು ಯಾವ ರೀತಿ ಕಟ್ಟಕೊಡಬೇಕು ಎಂದುಕೊಂಡಿದ್ದೆವೋ ಅದು ಶೇ 100 ಇಲ್ಲಿ ಪೂರ್ಣವಾಗಿದೆ’ ಎಂದು ಹೇಳುತ್ತಾರೆ.
‘ಕೋಮಾ ಏಕೆ, ಏನು ಎನ್ನುವುದು ಚಿತ್ರದ ವಿಶೇಷ. ಬದುಕಿನಲ್ಲಿ ಭಯ, ಆಸೆ ಇತ್ಯಾದಿ ಕ್ಷಣಗಳು ಒರುತ್ತದೆ. ಆ ಕ್ಷಣಗಳೇ ಕೋಮಾ. ಎರಡು ತಲೆಮಾರುಗಳ ನಡುವಿನ ಅಂತರದಿಂದ ಆರಂಭವಾಗುವ ಕಥೆ ಇದು. ಇದರೊಳಗೆ ಒಂದು ಕಥೆ ಇದೆ. ಕಥೆ ಏಕೆ ಬರುತ್ತದೆ, ಹೇಗೆ ಬರುತ್ತದೆ ಎನ್ನುವುದೂ ಪ್ರಮುಖ. ಅಂತಿಮವಾಗಿ ಹಿರಿಯ ನಿರ್ದೇಶಕ ಭಗವಾನ್ ಅವರು ನಿರ್ದೇಶಕ ಗುರುಪ್ರಸಾದ್‌ಗೆ ಸ್ಮರಣಿಕೆ ನೀಡುತ್ತಾರೆ. ಅಲ್ಲಿಗೆ ಚಿತ್ರ ಕೊನೆಯಾಗುತ್ತದೆ’ ಎನ್ನುವ ಅವರು, ತಮ್ಮ ಬದುಕಿಗೆ ಹತ್ತಿರದ ಪಾತ್ರ ಮಾಡಿದ್ದಾರಂತೆ.
‘ಕೋಮಾ’ ಚಿತ್ರದಲ್ಲಿನ ಟ್ರೇಲರ್ ಕಾರ್ತಿಕ್‌ಗೆ ನಾಲ್ಕೈದು ಅವಕಾಶಗಳನ್ನು ದೊರಕಿಸಿಕೊಟ್ಟಿದೆ. ‘ಈಗಾಗಲೇ ಐದು ಚಿತ್ರಗಳಲ್ಲಿ ನಟಿಸುವ ಆಹ್ವಾನ ಬಂದಿದೆ. ಒಂದು ಚಿತ್ರಕಥೆ ತುಂಬಾ ಇಷ್ಟವಾಗಿದೆ. ‘ಕೋಮಾ’ ನನ್ನ ಲೈಫ್ ಇದ್ದಂತೆ. ಹೆಚ್ಚು ತೃಪ್ತಿ ನೀಡಿದೆ’ ಎನ್ನುವ ಕಾರ್ತಿಕ್‌ ಶೀಘ್ರದಲ್ಲಿಯೇ ಮತ್ತೊಂದು ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಸುಳಿವು ನೀಡುವರು.      
***
ಹೊಸಬರ ‘ಕೋಮಾ’

ಈ ಹಿಂದೆ ಕೆಲವು ಕಿರುಚಿತ್ರ – ಸಾಕ್ಷ್ಯಚಿತ್ರಗಳನ್ನು ನಿರ್ದೇಶಿಸಿರುವ ರವಿಕಿರಣ್ ಹಾಗೂ ಚೇತನ್ ಜಂಟಿಯಾಗಿ ಆಕ್ಷನ್–ಕಟ್ ಹೇಳಿರುವ ಚೊಚ್ಚಿಲ ಚಿತ್ರ ‘ಕೋಮಾ’. ಹೊಸಬರಾದ ಕಾರ್ತಿಕ್, ಶ್ರುತಿ ನಂದೀಶ್, ರಂಜನಾ ಮಿಶ್ರಾ ತಾರಾಗಣದಲ್ಲಿರುವ ಪ್ರಮುಖರು.
‘ಕೋಮಾ’ ಅನ್ನುವುದು ಪ್ರತಿಯೊಬ್ಬರಲ್ಲೂ ಇದ್ದೇ ಇರುತ್ತದೆ. ಆದರೆ ಅದು ಯಾವಾಗ ಪ್ರಕಟಗೊಳ್ಳುತ್ತದೆ ಎಂಬುದನ್ನು ಹೇಳಲು ಅಸಾಧ್ಯ. ಅದು ಯಾವಾಗ ಬೇಕಾದರೂ ಯಾವ ರೀತಿಯಲ್ಲಾದರೂ ಬರಬಹುದು ಎನ್ನುವುದು ನಿರ್ದೇಶಕ ರವಿ ಅನಿಸಿಕೆ. ಅಂದಹಾಗೆ, ಈ ಚಿತ್ರ ಒಂದು ಹಂತಕ್ಕೆ ಬರಲು ಆರು ವರ್ಷ ಬೇಕಾಯಿತಂತೆ.
ಘಾಟಿಕಲ್ಲು, ಸಕಲೇಶಪುರ, ಹೊರನಾಡು ಇತರ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಹಿರಿಯ ನಿರ್ದೇಶಕ ಭಗವಾನ್ ಮತ್ತು ಯುವ ನಿರ್ದೇಶಕ ಗುರುಪ್ರಸಾದ್ ಅಭಿನಯಿಸಿದ್ದಾರೆ. ಅವರಿಬ್ಬರ ಮಧ್ಯೆ ನಡೆಯುವ ವಾದ, ವಿವಾದಗಳೇ ಚಿತ್ರದ ಹೈಲೈಟ್‌!
‘ಉಪ್ಪಿ–2’ ಚಿತ್ರರಲ್ಲಿ ಸಣ್ಣ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದ ಶ್ರುತಿ, ವೃತ್ತಿಯಲ್ಲಿ ಟೆಕ್ಕಿ. ಕಥಕ್ ನೃತ್ಯದಲ್ಲಿ ಆಸಕ್ತಿ ಇರುವ ಅವರು ಕೂಡ ಮೊದಲ ಬಾರಿ ಬಣ್ಣ ಹಚ್ಚಿದ್ದಾರೆ. ಇವರ ಜತೆ ಸುಚೇಂದ್ರಪ್ರಸಾದ್, ಅಜಿತ್‌ಕುಮಾರ್ ನಟನೆ ಇದೆ. ರಾಜು ಸೆಲ್ವಂ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಒಟ್ಟು ಐದು ಹಾಡುಗಳಿದ್ದು, ಆಶಿಕ್ ಅರುಣ್ ಸಂಗೀತ  ಸಂಯೋಜಿಸಿದ್ದಾರೆ. ಕಾರ್ತಿಕ್‌ ಮಲ್ಲೂರ್ ಕ್ಯಾಮೆರಾ ಹಿಡಿದಿದ್ದಾರೆ. 100 ಚಿತ್ರಮಂದಿರಗಳಲ್ಲಿ ‘ಕೋಮಾ’ ತೆರೆ ಕಾಣುತ್ತಿದೆ. 

No comments:

Post a Comment

Songs JukeBox

Kannada Live Tv Channels

Related Posts Plugin for WordPress, Blogger...