‘ಕೋಮಾ’ ಎಂಬ ಪದ ಕಿವಿಗೆ ಬಿದ್ದರೆ ಎರಡು ಸಂಗತಿಗಳು ನೆನಪಾಗುತ್ತವೆ. ಒಂದು, ಕೋಮಾ ಹಂತ ತಲುಪಿರುವ ರೋಗಿ. ಮತ್ತೊಂದು, ‘ಓಂ’ ಚಿತ್ರದ ‘ಕೋಮಾ ಕೋಮಾ..’ ಹಾಡು. ಇನ್ನುಮುಂದೆ, ‘ಕೋಮಾ’ ಎಂದರೆ ಮತ್ತೊಂದು ಸಂಗತಿ ನೆನಪಾಗುವಂತೆ ಮಾಡಲು ಹೊರಟಿದ್ದಾರೆ ನಿರ್ದೇಶಕರಾದ ರವಿ ಮತ್ತು ಚೇತನ್. ಈ ಜೋಡಿ ವರ್ಷದ ಹಿಂದೆಯೇ ಸದ್ದಿಲ್ಲದೆ, ‘ಕೋಮಾ’ ಎಂಬ ಚಿತ್ರಕ್ಕೆ ಕೈಹಾಕಿತ್ತು. ಇದೀಗ ಆ ಚಿತ್ರ ಸಂಪೂರ್ಣಗೊಂಡಿದ್ದು, ಇಂದು (ಮೇ 27) ತೆರೆಗೆ ಬರಲಿದೆ.
ಮನುಷ್ಯನಿಗೆ ಸಾಮಾನ್ಯವಾಗಿ ಅತೀ ದುಃಖವಾದಾಗ ಅಥವಾ ಅತೀ ಸಂತಸವಾದಾಗ ಆತನ ಮೈಂಡ್ ಬ್ಲಾಂಕ್ ಆಗುತ್ತದೆ. ಒಂದರೆಕ್ಷಣ ಏನು ಮಾಡಬೇಕು ಎಂಬುದು ತೋಚುವುದಿಲ್ಲ. ಚಿತ್ರತಂಡದ ಪ್ರಕಾರ, ಇದನ್ನು ಒಂದು ಕ್ಷಣದ ಕೋಮಾ ಎನ್ನುತ್ತಾರಂತೆ! ಆ ಅಂಶವನ್ನೇ ಪ್ರಧಾನವಾಗಿಟ್ಟುಕೊಂಡು ಈ ‘ಕೋಮಾ’ ಚಿತ್ರ ಸಿದ್ಧವಾಗಿದೆ. ‘ನಮ್ಮ ಚಿತ್ರದಲ್ಲಿ ಈ ಥರದ ಕೋಮಾ ಕ್ಷಣಗಳು ಬೇಕಾದಷ್ಟಿವೆ. ಅದನ್ನು ನಿಮಗೆ ಪರಿಚಯಿಸುತ್ತೇವೆ’ ಎನ್ನುತ್ತಾರೆ ನಿರ್ದೇಶಕರಲ್ಲಿ ಒಬ್ಬರಾದ ರವಿ. ಇನ್ನು, ಇದುವರೆಗೂ ಕ್ಯಾಮರಾ ಪ್ರವೇಶಿಸದಂಥ ಪ್ರದೇಶಗಳಲ್ಲಿ ಚಿತ್ರೀಕರಣ ಮಾಡಿರುವುದಾಗಿ ಹೇಳಿಕೊಳ್ಳುತ್ತಾರೆ ಮತ್ತೋರ್ವ ನಿರ್ದೇಶಕ ಚೇತನ್. ಮುಖ್ಯವಾಗಿ ‘ಕೋಮಾ’ ಹೊಸ ತಲೆಮಾರು ಮತ್ತು ಹಳೇ ತಲೆಮಾರಿನ ಸ್ಪರ್ಧೆಯನ್ನು ಹೇಳುತ್ತದೆಯಂತೆ. ಹೊಸ ತಲೆಮಾರನ್ನು ಪ್ರತಿನಿಧಿಸಲು ‘ಮಠ’ ಗುರುಪ್ರಸಾದ್ ಇದ್ದರೆ, ಹಳೇ ತಲೆಮಾರಿನ ನೇತೃತ್ವವನ್ನು ಹಿರಿಯ ನಿರ್ದೇಶಕ ಭಗವಾನ್ ವಹಿಸಿಕೊಂಡಿದ್ದಾರೆ. ‘ಒಬ್ಬರು ಕಥೆಗೆ ಪ್ರಾಮುಖ್ಯತೆ ಎಂದರೆ, ಮತ್ತೊಬ್ಬರು ಚಿತ್ರಕಥೆಗೆ ಪ್ರಾಮುಖ್ಯತೆ ಇರಬೇಕು ಎನ್ನುತ್ತಾರೆ. ಹೀಗೆ ಈ ಇಬ್ಬರು ಖ್ಯಾತ ನಿರ್ದೇಶಕರ ಜುಗಲ್ಬಂಧಿಯೂ ಚಿತ್ರದಲ್ಲಿದೆ’ ಎನ್ನುತ್ತಾರೆ ಚೇತನ್. ಸಾಮಾನ್ಯವಾಗಿ ಪ್ರೇಮಕಥೆ ಇರುವ ಸಿನಿಮಾಗಳಲ್ಲಿ ಪ್ರೀತಿ ಗೆಲ್ಲುತ್ತದೆ ಅಥವಾ ಸೋಲುತ್ತದೆ. ಆದರೆ ‘ಕೋಮಾ’ದಲ್ಲಿ ಇವೆರಡನ್ನು ಬಿಟ್ಟು ಬೇರೆ ಮತ್ತೇನನ್ನೋ ಹೇಳಲಿದ್ದಾರಂತೆ ನಿರ್ದೇಶಕರು.
ಮೊದಲ ಬಾರಿಗೆ ನಾಯಕ-ನಾಯಕಿಯಾಗಿ ಕಾರ್ತಿಕ್ ಮತ್ತು ಶ್ರುತಿ ಕಾಣಿಸಿಕೊಳ್ಳುತ್ತಿದ್ದಾರೆ. ‘ನನ್ ಲೈಫಲ್ಲೂ ಇದು ಕೋಮಾ ಕ್ಷಣ’ ಎನ್ನುವುದು ಕಾರ್ತಿಕ್ ಅಭಿಪ್ರಾಯವಾದರೆ, ಶ್ರುತಿಗೆ ಸಿನಿಮಾದಲ್ಲಿ ನಟಿಸಿದ್ದು ಖುಷಿ ನೀಡಿದೆ. ಈ ಹಿಂದೆ ‘ಉಪ್ಪಿ 2’ ಚಿತ್ರದಲ್ಲಿ ಚಿಕ್ಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಅವರು, ಸತತ ಪರಿಶ್ರಮದಿಂದಾಗಿ ಈ ಅವಕಾಶ ಪಡೆದುಕೊಂಡಿದ್ದಾರಂತೆ. ಮೂಲತಃ ಕ್ಲಾಸಿಕಲ್ ಡಾನ್ಸರ್ ಆಗಿರುವ ಶ್ರುತಿ, ಆಡಿಷನ್ ಮೂಲಕ ಈ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ರಂಜನಾಗೆ ಚಿತ್ರದಲ್ಲಿ ಪ್ರಮುಖ ಪಾತ್ರವಿದೆ.
‘ಕೋಮಾ’ದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಿರ್ದೇಶಕ ಭಗವಾನ್, ‘ದೊರೆ-ಭಗವಾನ್ ಎಂಬುದು ಕನ್ನಡದಲ್ಲಿ ಖ್ಯಾತ ನಿರ್ದೇಶಕ ಜೋಡಿ. ಅಂತೆಯೇ ರವಿ ಮತ್ತು ಚೇತನ್ ಕೂಡ ಖ್ಯಾತಿ ಪಡೆಯಲಿ. ಹೊಸಬರ ಜತೆ ಸೇರಿದ ಪರಿಣಾಮ, ನಾನಿನ್ನು ಯುವಕ ಎಂಬ ಫೀಲ್ ನನಗೆ ಬಂದಿದೆ. ಇಂದು ಹೊಸಬರ ಚಿತ್ರಕ್ಕೆ ಬೆಂಬಲ ಜಾಸ್ತಿ ಸಿಗುತ್ತಿದೆ. ಈ ಚಿತ್ರಕ್ಕೂ ಬೆಂಬಲ ಸಿಗಲಿ’ ಎಂದು ಹಾರೈಸುತ್ತಾರೆ.
Source: Vijayavani

No comments:
Post a Comment